This song, composed by Prof. M.S.Venugopal, captures the essence of the Jaagruthi Yathre
ತರುವೆವು ಕ್ರಾಂತಿಯ ಮಾಹಿತಿ ಕ್ರಾಂತಿಯ
ನಡಿಗೆಯ ಹೆಜ್ಜೆಯ ವಿಧಾನವು
ಪಾದದ ಯಾತ್ರೆ ಜಾಗೃತಿ ಯಾತ್ರೆ
ಮೈಲು ಮೈಲಿನಲಿ ಕೆತ್ತಿಹುದು
ಸರಗೂರಿನಲ್ಲಿ ಉಗಮವು ನಾಂದಿಯು
ಹೃದಯ ಹೃದಯಗಳ ಬಿಂದಿಯಲಿ
ಮಾಹಿತಿ ಕಾನೂನು ನೆವದಲಿ ನೆಪದಲಿ
ಮಿಡಿಯಿತು ನಡೆಯಿತು ಯುವಶಕ್ತಿ
ಹಳ್ಳಿ ಹಳ್ಳಿಯಲಿ ವ್ಯಕ್ತಿ ವ್ಯಕ್ತಿಯಲಿ
ಸಂಘರ್ಷದ ಸಮರವಿದೆ
ರಕ್ತದ ಕಣದಲಿ ಅಂಜಿಕೆ ನಿರ್ಲಕ್ಷ್ಯ
ಪರಿವರ್ತನೆಗೆ ಸಂಕಲ್ಪ
ಹೆಗ್ಗಡದೇವನ ಕೋಟೆಯ ಕಪಿಲ
ಪೇಟೆಯ ಗುಂಡಲಿಗೆ ಕುಂಡಲಿನಿಯು
ಚಾಮನ ಹೊಸಜಿಲ್ಲೆ ಕೊಳ್ಳೆಗಾಲದಿ
ಉಲಿಯಿತು ಯುವಸ್ವರ ಹಾದಿಬದಿಯಲಿ
ಪ್ರೇರಣೆ ಸ್ಪೂರ್ತಿಯು ಯುವಜನ ಗುಂಡಿಗೆ
ಆದರ್ಶದ ತೊರೆ ಯುವಶಕ್ತಿ
ಬಿಸಿಲು ಮಳೆಯಲು ಅಳುಕದೆ ಉಳುಕದೆ
ವಿರೋಧಕೆದುರು ಮೊರೆದಂಡು
ಗ್ರಾಮವು ನೂರಾರು ಪ್ರಭಾವ ಲಕ್ಷ
ಯಾತ್ರೆಯ ಯಶಸಿನ ಕ್ರಾಂತಿಯಲಿ
ರಾಜಧಾನಿಯ ದಂತದ ಗೋಪುರದಿ
ಮೊಳಗಿತು ಮಾಹಿತಿ ಕರೆಗಂಟೆ
ದಾರಿಬೀದಿಯಲಿ ಮೈಮನದಲ್ಲಿ
ಬಾಂಧವ್ಯದ ಸೆಲೆ ಸಾಂತ್ವನವು
ಆಸೆ ಕಂಗಳಲಿ ಕನಸು ಹಂಬಲದಿ
ಪ್ರಗತಿಯ ಭರವಸೆ ಬೆಸುಗೆಯಿದೆ
ಜನಪದ ಅಂತರಂಗ ಅನುಭವ ಗರ್ಭದಿ
ಜನುಮ ತಳೆದಿಹುದು ಹೊಸದೃಷ್ಟಿ
ಭವಿಷ್ಯದ ಗಗನಕೆ ಚಿಮ್ಮಲೆನಿಸುವ
ನಾಯಕ ದೃಷ್ಟಿಯ ನವವೃಷ್ಟಿ